ಕೊಲೋನ್ 3

ಇದು ಮಧ್ಯ ಅಮೆರಿಕದ ಪನಾಮಾ ರಾಜ್ಯದ ಪ್ರಮುಖ ನಗರಗಳಲ್ಲಿ ಎರಡನೆಯದು; ಪನಾಮಾ ಕಾಲುವೆಯ ಉತ್ತರದ್ವಾರ. ನಾಲೆಯ ಸರಹದ್ದಿನಲ್ಲಿರುವ ಕ್ರಿಸ್ಟೋಬಲ್ ರೇವು ವಾಸ್ತವಿಕವಾಗಿ ಕೊಲೋನ್ ನಗರದ ಬಡಾವಣೆ. ಅಮೆರಿಕ ಸಂಯುಕ್ತ ಸಂಸ್ಥಾನ ಸರ್ಕಾರ ಕ್ರಿಸ್ಟೋಬಲ್ ರೇವನ್ನು ಹಾಗೂ ಹಡಗುಕಟ್ಟೆಯನ್ನು ಅಭಿವೃದ್ಧಿಗೊಳಿಸಿದೆ. ಇದು ಕ್ಯಾರಿಬೀಯನ್ ಸಮುದ್ರದ ಬಹು ಮುಖ್ಯ ಬಂದರು. ಮಧ್ಯ ಮತ್ತು ದಕ್ಷಿಣ ಅಮೆರಿಕದ ಉತ್ತರದ ಬಂದರುಗಳಿಗೆ ರಫ್ತಾಗುವ ಸರಕುಗಳು ಇದರ ಮೂಲಕ ಸಾಗುತ್ತವೆ.
ಕೊಲೋನ್ ನಗರದ ಜನಸಂಖ್ಯೆ 59,032 (1960). ಇದು ಪನಾಮಾ ನಗರಕ್ಕೆ 48 ಮೈ. ದೂರದಲ್ಲಿರುವ ಪನಾಮಾ ರೈಲು ರಸ್ತೆಯ ಉತ್ತರದ ಕೊನೆದಾಣ; ಪನಾಮಾ ರಾಜ್ಯದ ಕೊಲೋನ್ ಪ್ರಾಂತ್ಯಕ್ಕೆ ರಾಜಧಾನಿ; ವಿವಿಧ ದೇಶಗಳ ರಾಯಭಾರಿಗಳಿರುವ ಸ್ಥಳ, ಪ್ರವಾಸಿ ಕೇಂದ್ರ. ಇಲ್ಲಿಯ ಜನ ಬಹುಮಟ್ಟಿಗೆ ನೀಗ್ರೋಗಳು; ಪನಾಮಾ ಕಾಲುವೆ ರಚನೆಯ ವಿವಿಧ ಕಾಲಗಳಲ್ಲಿ ಬ್ರಿಟಿಷ್ ವೆಸ್ಟ್ ಇಂಡೀಸ್ ದ್ವೀಪಗಳಿಂದ ಕೆಲಸಕ್ಕಾಗಿ ಇಲ್ಲಿಗೆ ಬಂದವರ ವಂಶಜರು. ಅನೇಕ ಜನಾಂಗಗಳ ಸಮ್ಮಿಶ್ರಣ ಈ ನಗರದಲ್ಲಿ ಕಾಣಬರುತ್ತದೆ. ಮೂರು ಖಂಡಗಳಿಗೆ ಸೇರಿದ ಜನರ ಭಾಷೆಗಳು ಇಲ್ಲಿ ಪ್ರಧಾನವಾಗಿವೆ.

ಕೊಲೋನ್ ನಗರವನ್ನು ಪನಾಮಾ ರೈಲು ಮಾರ್ಗದ ಕೊನೆಯ ನಿಲ್ದಾಣ ನಗರವಾಗಿ 1850ರಲ್ಲಿ ಸ್ಥಾಪಿಸಲಾಯಿತು. ಪ್ರಾರಂಭದಲ್ಲಿ ಅದಕ್ಕೆ ಪನಾಮಾ ರೈಲುಮಾರ್ಗ ನಿರ್ಮಾಪಕರಲ್ಲಿ ಒಬ್ಬನಾದ ವಿಲಿಯಂ ಎಚ್. ಆಸ್ಫಿನ್‍ವಾಲನ ಹೆಸರಿನಲ್ಲಿ ಆಸ್ಫಿನ್‍ವಾಲ್ ನಗರ ಎಂದು ಕರೆಯಲಾಗುತ್ತಿತ್ತು. ಸ್ಪ್ಯಾನಿಷ್ ಭಾಷೆಯಲ್ಲಿ ಕೊಲೋನ್ ಎಂದರೆ ಕೊಲಂಬಸ್ ಎಂದಾಗುತ್ತದೆ. ಅದರ ಯಮಳ ನಗರದ ಹೆಸರು ಕ್ರಿಸ್ಟೋಬಲ್, ರೈಲುಮಾರ್ಗ ಹಾಕಿದ ಮೇಲೆ ಕೊಲೋನ್ ನಗರ ಪ್ರಸಿದ್ಧಿಗೆ ಬಂತು; ಪನಾಮಾ ಕಾಲುವೆಯ ನಿರ್ಮಾಣದಿಂದ ಅದಕ್ಕೆ ಮತ್ತಷ್ಟು ಖ್ಯಾತಿ ದೊರೆಯಿತು. ಮೊದಮೊದಲು ಅನಾರೋಗ್ಯ ಸ್ಥಳವಾಗಿದ್ದ ಈ ನಗರಕ್ಕೆ ಪನಾಮಾ ನಾಲೆಯ ರಚನೆಗೆ ಸೇರಿದ ಅಧಿಕಾರಿ ಕರ್ನಲ್ ವಿಲಿಯಂ ಸಿ.ಜಾರ್ಜ್ ಅತ್ಯುತ್ತಮ ಚರಂಡಿ ವ್ಯವಸ್ಥೆಯನ್ನು ಹಾಗೂ ಕಶ್ಮಲ ಸಾಗಣೆಯ ಏರ್ಪಾಟುಗಳನ್ನು ಮಾಡಿದ. ಕೊಲೋನ್ ಈಗ ವಿಶ್ವದ ಉಷ್ಣವಲಯದ ಆಧುನಿಕ ಹಾಗೂ ಆರೋಗ್ಯಕರವಾದ ನಗರಗಳಲ್ಲಿ ಒಂದು. ಬೀದಿಗಳಿಗೆ ಹಾಸುಗಲ್ಲುಗಳನ್ನು ಹಾಕಿ ನಗರವನ್ನು ಚೊಕ್ಕಟವಾಗಿಟ್ಟಿದ್ದಾರೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ